ದಧೀಚಿ
	ಮೊದಲನೆಯ ಸ್ವಾಯಂಭುವ ಮನ್ವಂತರದ ಬ್ರಹ್ಮಮಾನಸ ಪುತ್ರನಾದ ಅಥರ್ವಣ ಋಷಿಯ ಮಗ. ತಾಯಿ ಕರ್ದಮ ಪುತ್ರಿಯಾದ ಶಾಂತಿ ಅಥವಾ ಬಿತ್ತಿ. ಧೃತವ್ರತ ಅಥರ್ವಶಿರ ಈತನ ಸಹೋದರರು. ಪತ್ನಿ ಪ್ರಾತಿಥ್ಯೇಯೀ. ಮಗ ಪಿಪ್ಪಿಲಾದ. ಈತನನ್ನು ದಧೀಚಿ ಎಂದೂ ಕರೆಯಲಾಗಿದೆ. ಈತನಿಗೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. ಇಂದ್ರ ಈತನಿಗೆ ಬ್ರಹ್ಮವಿದ್ಯೆ (ಮಧು) ಮತ್ತು ಪ್ರವರ್ಗ ವಿದ್ಯೆಯನ್ನು ಉಪದೇಶಿಸಿ ಅದನ್ನು ಯಾರಿಗೂ ಹೇಳಕೂಡದೆಂದು ಕಟ್ಟುಮಾಡಿದ. ಹಾಗೇನಾದರೂ ಹೇಳಿಕೊಟ್ಟರೆ ತಲೆ ಹಾರಿ ಹೋಗುವುದೆಂದು ತಿಳಿಸಿದ. ಅಶ್ವಿನೀ ದೇವತೆಗಳು ಬಂದು ತಮಗೆ ಬ್ರಹ್ಮವಿದ್ಯೆಯನ್ನು ಉಪದೇಶಿಸಬೇಕೆಂದು ಈತನಲ್ಲಿ ಪ್ರಾರ್ಥಿಸಿಕೊಂಡರು. ದಧೀಚಿ ಇಂದ್ರನ ಆಜ್ಞೆಯನ್ನು ತಿಳಿಸಿದ. ಆಗ ಅಶ್ವಿನೀ ದೇವತೆಗಳು ದಧೀಚಿಯ ತಲೆಯನ್ನು ತೆಗೆದಿಟ್ಟು ಕುದುರೆಯ ತಲೆಯನ್ನು ಜೋಡಿಸಿ ಅವನಿಂದ ಬ್ರಹ್ಮವಿದ್ಯೆಯನ್ನು ಕಲಿತರು. ಇದನ್ನರಿತ ಇಂದ್ರ ದಧೀಚಿಯ ತಲೆಯನ್ನು ಕತ್ತರಿಸಿದ. ಅನಂತರ ಅಶ್ವಿನೀ ದೇವತೆಗಳು ದಧೀಚಿಯ ನಿಜ ತಲೆಯನ್ನು ಜೋಡಿಸಿದರು. ಈ ವಿಚಾರ ಭಾರತ ಭಾಗವತ, ದೇವೀಭಾಗವತಗಳಲ್ಲಿ ಬಂದಿದೆ.

  	ಭೃಗು ಮಹರ್ಷಿಯ ಮಗ ದಧೀಚಿ. ಈತ ಸರಸ್ವತೀ ನದೀತೀರದಲ್ಲಿ ತಪಸ್ಸು ಮಾಡುತ್ತಿರಲು, ಈತನ ತಪಸ್ಸನ್ನು ಕೆಡಿಸಲು ಇಂದ್ರ ಅಲಂಬುಸೆಯೆಂಬ ಅಪ್ಸರೆಯನ್ನು ಕಳುಹಿಸಿಕೊಟ್ಟ. ಈಕೆಯಿಂದ ಆಕರ್ಷಿತನಾದ ದಧೀಚಿ ಸಾರಸ್ವತನೆಂಬ ಮಗನನ್ನು ಪಡೆದು ಆತ ವಾಸವಾಗಿರುವಲ್ಲಿ ಅನಾವೃಷ್ಟಿಯ ಭಯವಿಲ್ಲವೆಂದು ವರವಿತ್ತ.
 
 	ಒಮ್ಮೆ ದೇವತೆಗಳು ಈತನ ಬಳಿಗೆ ಬಂದು ತಮ್ಮ ಅಸ್ತ್ರಗಳನ್ನು ನ್ಯಾಸವಾಗಿ ಇಟ್ಟುಹೋದರು. ಬಹಳ ಕಾಲವಾದರೂ ದೇವತೆಗಳು ಬರಲಿಲ್ಲ. ಆಯುಧಗಳೆಲ್ಲವೂ ತುಕ್ಕು ಹಿಡಿದವು ನೀರಿನಿಂದ ಅಭಿಮಂತ್ರಿಸಿ ಅವುಗಳನ್ನೆಲ್ಲ ದಧೀಚಿ ಪಾನ ಮಾಡಿದ. ಬಹಳ ದಿನಗಳಾದ ಮೇಲೆ ದೇವತೆಗಳು ಬಂದು ತಮ್ಮ ಅಸ್ತ್ರಗಳಿಗಾಗಿ ಒತ್ತಾಯಪಡಿಸಿದರು. ಯೋಗ ಬಲದಿಂದ ದೇಹ ತ್ಯಾಗ ಮಾಡುತ್ತೇನೆ, ನನ್ನ ಮೂಳೆಗಳಿಂದ ನಿಮ್ಮ ಅಸ್ತ್ರ ಮಾಡಿಸಿಕೊಳ್ಳಿ ಎಂದು ಹೇಳಿ ದೇಹ ತ್ಯಾಗ ಮಾಡಿದ. ಬಳಿಕ ದೇವತೆಗಳು ಈತನ ಮೂಳೆಗಳಿಂದ ತಮಗೆ ಬೇಕಾದ ಆಯುಧಗಳನ್ನು ಮಾಡಿಸಿಕೊಂಡರು.

  	ವೃತ್ರಾಸುರನೆಂಬ ರಾಕ್ಷಸ ದೇವತೆಗಳಿಗೆ ಹಿಂಸೆ ಕೊಡುತ್ತಿದ್ದ. ಆತನನ್ನು ಕೊಲ್ಲಲು ಇಂದ್ರನಿಗೂ ಸಾಧ್ಯವಾಗಲಿಲ್ಲ. ಆಗ ಇಂದ್ರಾದಿ ದೇವತೆಗಳು ದಧೀಚಿ ಋಷಿಯ ಬಳಿಗೆ ಬಂದು ತಮ್ಮನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿಕೊಂಡರು. ಅಗ ದಧೀಚಿ ತಾನು ಬ್ರಾಹ್ಮಣನಾದ್ದರಿಂದ ನೇರವಾಗಿ ಕೊಲ್ಲುವ ಹಾಗಿಲ್ಲವೆಂದೂ ಆತ್ಮ ಸ್ಮರಣೆಯಲ್ಲಿ ತಾನು ಶರೀರ ಬಿಡುವುದಾಗಿಯೂ ಅನಂತರ ಅವರು ತನ್ನ ಮೂಳೆಯಿಂದ ಆಯುಧ ತಯಾರಿಸಿ ಅದರಿಂದ ಆ ರಾಕ್ಷಸನನ್ನು ಕೊಲ್ಲಬಹುದೆಂದೂ ತಿಳಿಸಿ ದೇಹ ತ್ಯಾಗ ಮಾಡಿದ. ದೇವತೆಗಳು ಈತನ ಬೆನ್ನಿನ ಮೂಳೆಯಿಂದ ಒಂದು ಆಯುಧ ತಯಾರಿಸಿದರು. ಅದೇ ವಜ್ರಾಯುಧ. ಇದರಿಂದ ಇಂದ್ರ ವೃತ್ರಾಸುರನನ್ನು ಕೊಂದ.									
	(ಡಿ.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ